ಕಾಡು ಕಣಗಿಲು

ಡಿಲ್ಲೆನಿಯೇಸೀ ಕುಟುಂಬದ ಡಿಲ್ಲೆನಿಯ ಪೆಂಟಗೈನ ಎಂಬ ವೈಜ್ಞಾನಿಕ ಹೆಸರಿನ ಮರ. ಇದು ಭಾರತದಾದ್ಯಂತ ವ್ಯಾಪಿಸಿದೆ. ಸುಮಾರು 30-70 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ಬಹಳ ದೊಡ್ಡವು; ಅವುಗಳ ಉದ್ದ ಸುಮಾರು 2-3 ಅಡಿ. ಹೂಗಳು ಅಂಬೆಲ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಅವುಗಳ ಬಣ್ಣ ಹಳದಿ. ಕಾಯಿಗಳು ಮಾಗಿದಾಗ ಕಿತ್ತಳೆ ಬಣ್ಣದವೂ ರಸಭರಿತವಾಗಿಯೂ ಇವೆ. ಇವು ತಿನ್ನಲು ಯೋಗ್ಯ.

 ಕಾಡುಕಣಗಿಲು ಹೆಚ್ಚು ಮಳೆ ಬೀಳುವ ಮತ್ತು ಉಷ್ಣತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಚೆನ್ನಾಗಿ ಬಿಸಿಲು ಬೀಳುವ ಸ್ಥಳಗಳಲ್ಲಂತೂ ಇದರ ಬೆಳೆವಣಿಗೆ ಹುಲುಸು. ಚಳಿಯನ್ನು ಇದು ತಡೆಯಲಾರದು. ಮರವನ್ನು ಕತ್ತರಿಸಿದಾಗ ಬುಡದಿಂದ ಬಲುಬೇಗನೆ ಚಿಗುರೊಡೆಯುತ್ತದೆ. ಚೌಬೀನೆ ಮಧ್ಯಮ ಭಾರದ್ದು (ಘನ ಅಡಿಗೆ 45-48 ಪೌಂ. ತೂಗುತ್ತದೆ) ಮತ್ತು ಸಾಧಾರಣ ಬಲವುಳ್ಳದ್ದು. ರಸಕಾಷ್ಠ (ಸ್ಯಾಪ್ವುಡ್) ನಸುಗೆಂಪಾಗಿಯೂ ಚೇಗುಭಾಗ (ಹಾರ್ಟವುಡ್) ಕೆಂಪುಮಿಶ್ರಿತ ಬೂದಿ ಬಣ್ಣದ್ದಾಗಿಯೂ ಇವೆ. ಚಾಬೀನೆಯನ್ನು ಮರಗೆಲಸಗಳಿಗೆ ಸುಲಭವಾಗಿ ಅಳವಡಿಸಬಹುದು. ಆದರೆ ಹೆಚ್ಚು ಬಾಳಿಕೆ ಬರುವುದಿಲ್ಲ. ಸಾಮಾನ್ಯ ದರ್ಜೆಯ ಪೀಠೋಪಕರಣವನ್ನು ಮಾಡಲೂ ಹಲಗೆ, ಆಸರೆಗಂಬ ಮುಂತಾದವುಗಳಿಗೂ ಇದನ್ನು ಉಪಯೋಗಿಸುತ್ತಾರೆ. ಕಾಡುಕಣಿಗಲು ಮರದ ತೊಗಟೆಯಿಂದ ಒಂದು ಬಗೆಯ ನಾರನ್ನು ತೆಗೆಯಬಹುದು; ಇದನ್ನು ಹಗ್ಗ ಮಾಡಲು ಬಳಸುವುದುಂಟು. ಎಲೆಗಳನ್ನು ಹಸಿರುಗೊಬ್ಬರವಾಗಿಯೂ ಉಪಯೋಗಿಸಬಹುದು.     

  (ಎ.ಕೆ.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ